ಮಹಾನುಭಾವ ಸಂಪ್ರದಾಯ
ಒಂದು ವೈಷ್ಣವಪಂಥ, ಭಾಗವತ ಪಂಥದ ಒಂದು ಶಾಖೆ. ಕಾಶ್ಮೀರದಿಂದ ಕರ್ನಾಟಕದವರೆಗೆ, ಅದರಲ್ಲೂ ಮಹಾರಾಷ್ಟ್ರದ ಭೂಭಾಗದಲ್ಲಿ ವಿಶೇಷವಾಗಿ ಹಬ್ಬಿಕೊಂಡಿದ್ದ ಈ ಪಂಥವನ್ನು ಮಹಾತ್ಮಪಂಥ, ಅಚ್ಯುತಪಂಥ, ಜಯಕೃಷ್ಣೀಪಂಥ, ಭಟಮಾರ್ಗ ಮತ್ತು ಪರಮಾರ್ಗ ಎಂದೂ ಕರೆಯಲಾಗಿದೆ. ಮಹಾನ್ ಅನುಭಾವಃ ತೇಜಃ ಬಲಂ ವಾಯಸ್ಯಸ ಮಹಾನುಭಾವ (ಮಹತ್ತಾದ ಅನುಭಾವ, ತೇಜಸ್ಸು ಮತ್ತು ತಪೋಬಲ ಯಾವನಿಗುಂಟೋ ಅತ ಮಹಾನುಭಾವ) ಎಂಬುದು ನಿರ್ವಚನ. ಈ ಪಂಥದ ಮೂಲ ಹೆಸರು ಪರಾಮಾರ್ಗ ಎಂದು ಕೆಲವು ವಿದ್ವಾಂಸರ ಊಹೆ. ಈ ಸಂಪ್ರದಾಯ ಅಥವಾ ಪಂಥದ ಮೂಲ ಸಂಸ್ಥಾಪಕ ದತ್ತಾತ್ರೇಯ. ಪರಾಮಾರ್ಗವನ್ನು ಪರತತ್ತ್ವ ಎಂದು ಕುಮಾರವಾಯಸ ಕರೆದು ದತ್ತಾತ್ರೇತ ಹೀಗೆ ಸ್ತುತಿಸಿದ್ದಾನೆ :
	ರಾಯ ಕೇಳೈ ವಿಮಲ ದತ್ತಾ
	ತ್ರೇಯವೆಸರಲಿ ಧಮೃವನು ಪೂ
	ರಾಯದಲಿ ಪಲ್ಲವಿಸಿದನು ಹೈಹಯನರಾಜ್ಯದಲ್ಲಿ
	ಬಾಯಿಬಡಕರು ಬಗುಳಿದರೆ ಹರಿ
	ಯಾಯತಿಕೆ ಪಾಸಟಿಯ ನಿಗಮದ
	ಬಾಯಬಿಯಗವೀ ಮುಕುಂದನನರಿವರಾರೆಂದ-ಸಭಾಪರ್ವ 

ದತ್ತಾತ್ರೇಯ, ಶ್ರೀಕೃಷ್ಣ, ಚಾಂಗದೇವರಾವುಳ, ಗುಂಡಮರಾವುಳ ಅಥವಾ ಗೋವಿಂದ ಪ್ರಭು ಮತ್ತು ಚಕ್ರಧರ ಇವರನ್ನು ಪಂಚಕೃಷ್ಣರೆಂದೂ ಅವತಾರ ಪುರುಷರೆಂದೂ ಪರಿಗಣಿಸಲಾಗುತ್ತದೆ. ದತ್ತಾತ್ರೇಯ ಹಾಗೂ ಶ್ರೀಕೃಷ್ಣರೆಂದೂ ಅವತಾರ ಪುರುಷರೆಂದೂ ಪರಿಗಣಿಸಲಾಗುತ್ತದೆ. ದತ್ರಾತ್ರೇಯ ಹಾಗೂ ಶ್ರೀಕೃಷ್ಣದಲ್ಲಿ ವಿಶೇಷಸ್ಥಾನ, ಸಾಕಾರ ಇಲ್ಲಿ ನಾಮ ಮೂರ್ತಿಸ್ವರೂಪ, ನಿರಾಕಾರ ಲೀಲಾ ಚೇಷ್ಠಾಸ್ವರೂಪ. ಪರಮೇಶ್ವರನ ಆನಂದಮಯ ಸ್ವರೂಪವನ್ನು ಪಡೆದುಕೊಳ್ಳಬೇಕೆಂಬುದೇ ಮುಖ್ಯಧ್ಯೇಯ. ಚಕ್ರಧರಸ್ವಾಮಿ ಈ ಮತವನ್ನು ಹೆಚ್ಚು ಪ್ರಚಾರಕ್ಕೆ ತಂದ. 

	ಈ ಪಂಥದ ಪ್ರಕಾರ ಜೀವ, ಪ್ರಪಂಚ, ದೇವತೆ ಮತ್ತು ಪರಮೇಶ್ವರ-ಈ ನಾಲ್ಕು ಅನಾದಿ ಹಾಗೂ ಅನಂತ. ಇವು ಪ್ರತಿಯೊಂದೂ ಸ್ವತಂತ್ರ. ಇರುವೆ ಸಕ್ಕರೆಯ ಆಚೆಗಿದ್ದು ಸಕ್ಕರೆಯ ಸವಿಯನ್ನು ಸವಿಯುವಂತೆ ಭಕ್ತ ಭಗವಂತನಾಚೆಗೆ ಇದ್ದು ಅವನ ಆನಂದ ಸ್ವರೂಪದ ಸವಿಯನ್ನು ಸವಿಯುತ್ತಾನೆ. ಭಕ್ತನ ಅಸಿತ್ತ್ವಕ್ಕೆ ಹೆಚ್ಚು ಮಹತ್ವ, ಕಡುತರ ಆಚಾರಪಾಲನೆ, ಈ ಪಂಥದ ಆದ್ಯ ಕರ್ತವ್ಯ. ಪಾರಣ ಉಳಿಯಲೂ ಅವಶ್ಯವಾದ ಆಹಾರ ಮಾತ್ರ ತೆಗೆದುಕೊಳ್ಳಬೇಕು. ಆದರೆ ಆಹಾರ ಇಂದ್ರಿಯಗಳ ಚಾಪಲ್ಯದ ಬೆಳೆವಣಿಗೆಗೆ ಅಲ್ಲ. ಈ ಪಂಥದ ಶಾಖೆಗಳಿಗೆ ಅಮ್ನಾಯಗಳೆಂದೂ ಹೇಳುತ್ತಾರೆ. ಭಾವದೇವವ್ಯಾಸ, ಕೇಶವವ್ಯಾಸ, ರವಳೋವ್ಯಾಸ, ನಾರೋವ್ಯಾಸ, ಭಟೋವಾಯಸ ಮುಂತಾಗಿ ಕೆಲವರ ಹೆಸರುಗಳು ವ್ಯಾಸ ಶಬ್ಧದಿಂದ ಅಂತ್ಯಗೊಳ್ಳುತ್ತವೆ. ಕೃಷ್ಣನ ಚರಿತ್ರೆಯೇ ಇವರ ಗ್ರಂಥಗಳ ವಸ್ತು. ಶಿಶುಪಾಲವಧ, ಭಾಗವತ, ವಸ್ತ್ರಾಪಹರಣ, ರುಕ್ಮಿಣೀ ಸ್ವಯಂವರ, ಜ್ಞಾನಬೋಧೆ, ಸಹ್ಯಾದ್ರಿವರ್ಣನ, ಋದ್ರಿಪುರವರ್ಣನ ಎಂಬ ಏಳು ಗ್ರಂಥಗಳನ್ನು ಸಾತೀಗ್ರಂಥವೆಂದೇ ಕರೆಯುತ್ತಾರೆ. ಇವರು ತತ್ತ್ವಗಳನ್ನು ತಿಳಿಯಪಡಿಸಲು ದೇಶೀಯ ಭಾಷೆಗಳಲ್ಲಿಯೇ ಗ್ರಂಥಗಳನ್ನು ರಚಿಸಿದ್ದಾರೆ. 						 (ಎಸ್.ಎಸ್.ಜೆಎ.) 

ಮಹಾನುಭಾವ ಪಂಥ ಒಂದು ರೀತಿಯಿಂದ ಸಮಾಜದಲ್ಲಿ ಕ್ರಾಂತಿಯನ್ನುಂಟು ಮಾಡಿತು ಎನ್ನಬಹುದು. ಈ ಧರ್ಮ ಜನಸಾಮಾನ್ಯರ ಧರ್ಮವಾಗಿ ಪರಿಣಮಿಸಿತು. ವೈದಿಕಧರ್ಮಕ್ಕೆ ವ್ಯತಿರಿಕ್ತವಾಗಿ ಈ ಪಂಥದಲ್ಲಿ ಸ್ತ್ರೀಯರಿಗೂ ಶೂದ್ರರಿಗೂ ಪ್ರವೇಶವಿದ್ದಿತು. ಜನಸಾಮಾನ್ಯರ ತಿಳಿವಳಿಕೆಗಾಗಿ ಪ್ರಾದೇಶಿಕ ಭಾಷೆಯಾದ ಮರಾಠಿಯನ್ನೇ ಮಹಾನುಭಾವರು ಬಳಕೆಯಲ್ಲಿ ತಂದರು. ಬೋಧೆಯ ಭಾಷೆ ಮರಾಠಿಯಾಗಿದ್ದಿತಷ್ಟೇ ಅಲ್ಲದೆ ಮರಾಠಿಯಲ್ಲಿ ಗ್ರಂಥಗಳನ್ನೂ ಬರೆದರು. ಈ ಮಹಾನುಭಾವಿ ಸಾಹಿತ್ಯವೇ ಮರಾಠಿಯ ಪ್ರಾಚೀನತಮ ಸಾಹಿತ್ಯವಾಗಿದೆ. ಈ ಮುಂದೆ ಕಾಣಿಸಿರುವ ಏಳು ಗ್ರಂಥಗಳು ಮಹಾನುಭಾವರ ಪವಿತ್ರ ಗ್ರಂಥಗಳಾಗಿವೆ. ಕವೀಶ್ವರ ಭಾಸ್ಕರ ಭಟ್ಟನ 1 ಶಿಶುಪಾಲವಧ (1298) ಮತ್ತು 2 ಉದ್ಭವ ಗೀತಾ (1309) ಎರಡನೆಯದು ಭಾಗವತದ 11ನೆಯ ಸ್ಕಂಧದ ಮೇಲೆ ಆವಲಂಬಿಸಿದೆ. 2 ದಾಮೋದರ ಪಂಡಿತನ ವಚ್ಫಹರಣ (1278) ಭಾಗವತದ ದಶಮ ಸ್ಕಂಧದಲ್ಲಿಯ ಕಥೆಯೊಂದರ ಆಧಾರದ ಮೇಲೆ ಬರೆದುದು. 4 ನರೇಂದ್ರ ಪಂಡಿತನ ರುಕ್ಮಿಣೀ ಸ್ವಯಂವರ (1282). ಇದು ಶ್ರೀಕೃಷ್ಣ ಮತ್ತು ರುಕ್ಮಿಣಿಯರ ಸ್ವಯಂವರ ಕಥೆಯಾಗಿದ್ದು ಒಳ್ಳೆಯ ಕಾವ್ಯಗುಣಗಳಿಂದ ಕೂಡಿದೆ. 5 ವಿಶ್ವನಾಥ ಬಲಪುರಕನ ಜ್ಞಾನ ಪ್ರಬೋಧ (1331). 6 ಖಳೋವ್ಯಾಸನ ಸಹ್ಯಾದ್ರಿ ವರ್ಣನ (1333) ಮತ್ತು 7 ನಾರಾಯಣ ಪಂಡಿತನ ಋದ್ಧಿಪುರ ವರ್ಣನ. ಕೊನೆಯ ಮೂರು ಗ್ರಂಥಗಳಲ್ಲಿ ಮಹಾನುಭಾವ ಪಂಥದ ಧಾರ್ಮಿಕ ತತ್ತ್ವಗಳು, ಈ ಪಂಥದ ಸಾಧು ಸಂತರ ಮತ್ತು ಪವಿತ್ರ ಸ್ಥಳಗಳ ವರ್ಣನೆಗಳು ಅಡಕವಾಗಿವೆ. 

	13-14ನೆಯ ಶತಮಾನಗಳಲ್ಲಿ ಭರದಿಂದ ಪ್ರಚಾರದಲ್ಲಿದ್ದ ಈ ಪಂಥ 15ನೆಯ ಶತಮಾನದ ಹೊತ್ತಿಗೆ ಇಳಿಮುಖವಾಗತೊಡಗಿತು. ವೇದಗಳ ಮತ್ತು ವೈದಿಕ ಧರ್ಮಗಳಿಗೆ ವಿರೋಧವಾದ ಆಚಾರಗಳು, ಸ್ತ್ರೀಯರಿಗೂ ಶೂದ್ರರಿಗೂ ಸಂನ್ಯಾಸ ದೀಕ್ಷೆ ಹಿಂದುಗಳಿಂದ ತಾವು ಬೇರೆ ಎಂದು ಹೇಳಿಕೊಳ್ಳುವುದು-ಇವೇ ಮುಂತಾದವುಗಳು ಇದಕ್ಕೆ ಕಾರಣಗಳು ಎಂದು ಹೇಳಬಹುದು. 		 
 (ಎಸ್. ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ